ಗೋಂಧಳಿ ಸಮಾವೇಶ 2017 – ಬಾಗಲಕೋಟ ಜಿಲ್ಲೆಯ ಸುಕ್ಷೇತ್ರ ಕೂಡಲಸಂಗಮದಲ್ಲಿ ದಿನಾಂಕ : 12-11-2017ರಂದು ಗೋಂಧಳಿ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 15 ಸಾವಿರಕ್ಕಿಂತಲೂ ಅಧಿಕ ಗೋಂಧಳಿ ಸಮಾಜದ ಬಾಂಧವರು ತಮ್ಮ ಮೂಲ ಕಸಬುಗಳ ಪ್ರದರ್ಶನ, ಕುಂಭಮೇಳ ಹಾಗೂ ವಿವಿಧ ಕಲಾತಂಡಗಳ ಕಲೆಯ ಪ್ರದರ್ಶನದೊಂದಿಗೆ ಸಮಾವೇಶವನ್ನು ಪ್ರಾರಂಭಿಸಿದರು
ಬೆಳಿಗ್ಗೆ 10-00 ಗಂಟೆಗೆ ಬಸವ ಕಲಾಲೋಕದಿಂದ ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ಸಭಾಭವನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಜಮಖಂಡಿಯ ಜೈ ಭವಾನಿ ಮಿತ್ರ ಮಂಡಳ ಜಗದಂಭಾ ಡೋಲ ಪತಕ, ಜಾನಪದ ಕಲಾತಂಡ ಕಮತಗಿಯ ಹಲಗೆ ಮಜಲು, ದಾವಣಗೆರೆ ಜಿಲ್ಲೆ ಅರಸೀಕೆರೆಯ ದುರ್ಗಾದೇವಿಯ ಹಲಗಿ ವಾದ, ಸಂಕೇಶ್ವರ ಗೋಂಧಳಿ ಸಮಾಜದ ಗೊಂಧಳ ನೃತ್ಯ, ಬುಡಬುಡಕಿ ಹೇಳುವದು, ಕೌದಿ ಪ್ರದರ್ಶನ, ಗಿಳಿಶಾಸ್ತ್ರ, ಜ್ಯೋತಿಷ್ಯ ಹೇಳುವ ಪ್ರದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಗೋಂಧಳಿ ಸಮಾಜದ ಸಂಘಟನೆ ಗೀತೆಗೆ ನೃತ್ಯ ಹಾಕಿದರೆ, ಮಹಿಳೆಯರು ಕುಂಭಮೇಳದ ಮೂಲಕ ಜನರನ್ನು ಆಕರ್ಷಿಸಿದರು. ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಸಮಾಜದ ಹಲವಾರು ಮುಖಂಡರು ತಮ್ಮ ಅನಿಸಿಕೆಯನ್ನು ವೇದಿಕೆಯಲ್ಲಿ ವ್ಯಕ್ತಪಡಿಸಿದರು.
ಸುಮಾರು 12-30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಕ್ಯಾಪ್ಟರ್ ಮುಖಾಂತರ ಕೂಡಲಸಂಗಮಕ್ಕೆ ಬಂದಿಳಿದರು. ನಂತರ ತಮ್ಮ ಮಂತ್ರಿಮಂಡಳದ ಸಹೊದ್ಯೋಗಿಗಳಾದ ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ, ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ ಉಮಾಶ್ರೀ, ಗಣಿ ಮತ್ತು ಭೂವಿಜ್ಞಾನ ಸಚಿವರಾದ ವಿನಯ ಕುಲಕರ್ಣಿ, ಶಾಸಕರು ಹಾಗೂ ರಾಜಕೀಯ ಮುಖಂಡರಾದ ಸತೀಶ ಜಾರಕೀಹೊಳಿ, ಎಚ್.ವಾಯ್. ಮೇಟಿ, ಎಸ್.ಆರ್. ಪಾಟೀಲ, ವೀರಣ್ಣ ಮತ್ತಿಕಟ್ಟಿ, ಯಶವಂತರಾಯಗೌಡ ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಜೆ.ಟಿ.ಪಾಟೀಲ, ರಾಘವೇಂದ್ರ, ಎಸ್.ಜಿ. ನಂಜಯ್ಯನಮಠ, ಡಾ|| ದೇವರಾಜ ಪಾಟೀಲ, ವಿಜಯಾನಂದ ಕಾಶಪ್ಪನವರ ಹಾಗೂ ಇತರರೊಂದಿಗೆ ನೇರವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಶತಮಾನಗಳಿಂದ ತುಳಿತಕ್ಕೊಳಗಾದ ಗೋಂಧಳಿ ಸಮಾಜದ ಜನರಿಗೆ ನ್ಯಾಯ ನೀಡಬೇಕಾಗಿರುವುದು ಸರಕಾರದ ಕರ್ತವ್ಯ, ಈ ಹಿನ್ನೆಲೆಯಲ್ಲಿ ಸಮಾಜದ ಜನರ ವಾಸಕ್ಕಾಗಿ ಪ್ರತಿ ತಾಲೂಕಿನಲ್ಲಿ ಜಮೀನು ಖರೀದಿಸಿ ಸರಕಾರದಿಂದಲೇ ಮನೆ ನಿರ್ಮಿಸಿ ಕೊಡುವ ಮೂಲಕ ನೆಲೆ ಕಲ್ಪಿಸುವದಾಗಿ ಹೇಳಿದರು. ಸಮಾಜದ ಜನರು ಶಿಕ್ಷಣ ಸಂಸ್ಥೆ ಕಟ್ಟಿಸಲು ಮುಂದಾದರೆ ಅದಕ್ಕೆ ಅಗತ್ಯವಿರುವ ಭೂಮಿಯನ್ನು ಸರಕಾರವೇ ಖರೀದಿಸಿ ಕಟ್ಟಡವನ್ನು ಕಟ್ಟಿಕೊಡಲಾಗುವುದು. ಸ್ವತಂತ್ರ ಭಾರತದ ನಂತರ ಇಲ್ಲಿಯವರೆಗೂ ಗೋಂಧಳಿ ಸಮಾಜದ ಯಾರೊಬ್ಬರೂ ಶಾಸಕರಾಗದೇ ಇದ್ದದ್ದನ್ನು ಮನಗೊಂಡ ಮುಖ್ಯಮಂತ್ರಿಗಳು ಮುಂದಿನ ದಿನಮಾನಗಳಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಸಮಾಜದ ಹೋರಾಟಗಾರರಿಗೆ ನೀಡಲಾಗುವುದೆಂದರು. ವ್ಯಾಪಾರ ಮಾಡಲು ಬಡ್ಡಿರಹಿತ ಸಾಲ ವಿತರಣೆ ಸೇರಿದಂತೆ ಕರಕುಶಲ ಕೈಗಾರಿಕೆ ಮೂಲಕ ಕೌದಿ ತಯಾರಿಕೆಗೆ ಉತ್ತೇಜನ ನೀಡುವ ಭರವಸೆ ನೀಡಿದರು.
ಸಾಮಾಜಿಕ ನ್ಯಾಯದ ಪರವಾಗಿ ಇರುವ ರಾಜ್ಯ ಸರಕಾರ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಕಳೆದ ಬಜೆಟನಲ್ಲಿ 100 ಕೋಟಿ ರೂ. ಮೀಸಲಿಡಲಾಗಿತ್ತು. ಮುಂದಿನ ಬಜೆಟ್‍ನಲ್ಲಿ ಅಲೆಮಾರಿಗಳಿಗೆ ಇನ್ನು ಹೆಚ್ಚಿನ ಹಣ ನೀಡಲಾಗುವುದು ಹಾಗೂ ಪರಿಶಿಷ್ಠ ಜಾತಿ ಮತ್ತು ಪಂಗಡದ ಜನರಿಗೆ ನೀಡುವ ಸರಕಾರಿ ಸವಲತ್ತುಗಳನ್ನು ನೀಡಲಾಗುವುದು ಎಂದರು. ಹೊಟ್ಟೆಪಾಡಿಗಾಗಿ ಊರೂರು ಸುತ್ತುವ ಗೋಂಧಳಿ ಸಮಾಜದವರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ವಾಭಿಮಾನದ ಬದುಕು ಸಾಗಿಸಲು ಮುಂದಾಗಬೇಕು ಎಂದು ಸಮಾಜದ ಜನರಿಗೆ ಕಿವಿ ಮಾತು ಹೇಳಿದರು. ಸುಮಾರು 3 ಗಂಟೆಗಳ ಕಾಲಕ್ಕೂ ಅಧಿಕವಾಗಿ ಮುಖ್ಯಮಂತ್ರಿ ಹಾಗೂ ಅನೇಕ ರಾಜಕೀಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಗೋಂಧಳೆವಾಡಿಯ ತುಕಾರಾಮ ಮಹಾರಾಜರು, ಪಂಢರಪುರದ ಕೃಷ್ಣಮಹಾರಾಜ ಶಿವೂರಕರ, ಶರತ್ ಮಹಾರಾಜರು ಸಾನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷರಾದ ಬಿ. ವಿ. ಭೋಸಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. bigboy.com