ಭೀಮಾತೀರದ ಹಂತಕರು
ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಯ ಹದ್ದಿನಲ್ಲಿ ಬರುವಂತಹ ಇಂಡಿ, ಚಡಚಣ, ಝಳಕಿ, ಸಿಂದಗಿ, ಅಫಜಲಪುರ ಮತ್ತು ಆಲಮೇಲ ಪ್ರದೇಶಗಳ ಸುತ್ತಮುತ್ತ ನೂರಾರು ಕೊಲೆಗಳು ಆಗಿವೆ. ‘ಭೀಮಾತೀರದ ಹಂತಕರು’ ಎನ್ನುವ ಹಣೆಪಟ್ಟಿಯನ್ನು ಈ ಭಾಗಕ್ಕೆ ಹೊರಿಸಲಾಗಿದೆ. ದಶಕಗಳಿಂದ ಈ ಭಾಗದಲ್ಲಿ ನಡೆಯುವ ಕೊಲೆಗಳ ಜಾಡು ಹಿಡಿದಾಗ ರಕ್ತ ಚರಿತ್ರೆಯ ಕರಾಳ ಮುಖಗಳ ಒಂದೊಂದು ಪುಟ ತೆರೆಯುತ್ತದೆ. ಅಸಲಿಗೆ ಈ ಕೊಲೆಗಳ ಮೂಲ ಕಾರಣ ರಾಜಕೀಯ, ಒಣಪ್ರತಿಷ್ಠೆ ಮತ್ತು ಕಿತ್ತು ತಿನ್ನುವ ಬಡತನ !
ಭೀಮಾ ನದಿ ತೀರದ ಅಂಚಿನಲ್ಲಿರುವ ಈ ಪ್ರದೇಶಗಳಲ್ಲಿ ನಡೆಯುವ ಪಾತಕಿ ಕೆಲಸಗಳನ್ನು ಭೀಮಾತೀರದ ಹಂತಕರು ಎಂದು ‘ಭೀಮಾ’ ನದಿಯನ್ನು ಸೇರಿಸಿ ಕುಖ್ಯಾತಿಗೊಳಿಸಿದ್ದು ವಿಪರ್ಯಾಸವೇ ಸರಿ. ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿನಲ್ಲಿ ಹುಟ್ಟುವ ಭೀಮೆ ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಹರಿದು ಕೊನೆಯಲ್ಲಿ ಕಿರಿದಾಗುತ್ತ ಉತ್ತರ ಕರ್ನಾಟಕದ ಗಡಿ ಭಾಗಗಳ ಉದ್ದಕ್ಕೂ ಹರಿಯುತ್ತಾಳೆ. ಒಣ ಬಯಲು ಪ್ರದೇಶಗಳಾದ ವಿಜಯಪುರ, ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳು ಹೆಚ್ಚಾಗಿ ಬರಗಾಲದಿಂದ ತತ್ತರಿಸುತ್ತವೆ. ಇಂತಹ ಪ್ರದೇಶದಲ್ಲಿ ಹರಿಯುವ ಭೀಮಾ ನದಿಯು ಮಳೆಗಾಲದಲ್ಲಿ ಜನರ ಬದುಕನ್ನು ಹಸನಾಗಿಸುತ್ತಾಳೆ. ಬೇಸಿಗೆಯಲ್ಲಿ ಜೀವನದಿಯು ಒಣಗಿದಾಗ ಆ ಭಾಗದ ಜನರ ಸಮಸ್ಯೆ ಕೇಳತೀರದು…! ಕರ್ನಾಟಕದ ಉಳಿದ ಭಾಗಗಳಿಗೆ ಹೊಲಿಸಿದರೆ ಇಲ್ಲಿ ಸಾಮಾಜಿಕ ಏರುಪೇರುಗಳು ವಿಪರೀತ. ಜಮೀನ್ದಾರ ಶೋಷಣೆ ಪದ್ದತಿ ಈಗಲೂ ಇಲ್ಲಿ ಜಾರಿಯಲ್ಲಿದೆ. ಇಂತಹ ಜಮೀನ್ದಾರನೊಬ್ಬನ ವಿರುದ್ದ ಸಿಡಿದೆದ್ದವನೇ ಚಂದಪ್ಪ ಹರಿಜನ. ಮೊದಲಿಗೆ ಆ ಭಾಗದ ‘ರಾಬಿನ ಹುಡ್’ ಎನಸಿಕೊಂಡ ಚಂದಪ್ಪ ಹರಿಜನ ನಂತರ ಕೊಲೆ ಮತ್ತು ದರೋಡೆಗಳನ್ನು ಮಾಡಿ ಕುಖ್ಯಾತಿ ಗಳಿಸಿದ. 2000ನೇ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಧೋತರೆ ಗ್ರಾಮದಲ್ಲಿ ಪೊಲೀಸರು ಎನಕೌಂಟರ್ ಮಾಡಿ ಚಂದಪ್ಪ ಹರಿಜನನ್ನು ಕೊಂದರು.
ಚಂದಪ್ಪ ಹರಿಜನ ಮತ್ತು ಅವನ ಸಹಚರರು ಕೊಲೆ, ದರೋಡೆ ಮತ್ತು ಸುಲಿಗೆಗಳಂತಹ ಕೆಲಸಗಳನ್ನು ಮಾಡಿ ‘ಭೀಮಾ ತೀರದ ಹಂತಕರು’ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದರು. ಚಂದಪ್ಪ ಹರಿಜನ ಮರಣದ ನಂತರ ಅವನ ಬಲಗೈ ಭಂಟ ಭಾಗಪ್ಪ ಹರಿಜನ ಪಾತಕಿ ಲೋಕಕ್ಕೆ ನಿಯಂತ್ರಿಸ ತೊಡಗಿದ. 2017ರಲ್ಲಿ ಇತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಂದರ್ಭದಲ್ಲಿ, ವಿಜಯಪುರ ಕೋರ್ಟ ಆವರಣದಲ್ಲೇ ಅವನ ಶತ್ರುಗಳು ಗುಂಡಿನ ಸುರಿಮಳೆಗೈದರು. ಐದು ಗುಂಡುಗಳು ಅವನ ದೇಹಕ್ಕೆ ಹೊಕ್ಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾಗಪ್ಪನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಜೀವನ್ಮರಣದ ಹೋರಾಟದಲ್ಲಿ ಈತ ಬದುಕುಳಿದ !
ಇನ್ನೇನು ಎಲ್ಲವೂ ಶಾಂತವಾಗಿದೆ ಎಂದು ಜನರು ನಿಟ್ಟುಸಿರು ಬಿಡುವುದರಲ್ಲೇ ಮತ್ತೊಂದು ಕೊಲೆ ನಡೆದು ಹೋಗಿತ್ತು. ಆದರೆ ಇಲ್ಲಿ ಪೊಲೀಸರ ಎನಕೌಂಟರ ಮುಖಾಂತರ ಧರ್ಮರಾಜ ಚಡಚಣ ಎನ್ನುವವನನ್ನು ಕೆಡವಿದ್ದರು. 2017 ಸೆಪ್ಟೆಂಬರ್ 30 ರಂದು ಚಡಚಣ ಪೊಲೀಸ್ ಠಾಣೆಯ ಪಿ.ಎಸ್.ಐ. ಗೋಪಾಲ ಹಳ್ಳೂರ ನೇತೃತ್ವದಲ್ಲಿ ತಪಾಸಣೆಗೆಂದು ಧರ್ಮರಾಜ ಎನ್ನುವ ಕುಖ್ಯಾತ ರೌಡಿ ಮನೆಗೆ ಹೋಗಿದ್ದರು. ಪೊಲೀಸ್ ಮತ್ತು ರೌಡಿ ಮಧ್ಯೆ ಗುಂಡಿನ ಚಕಮಕಿಯಲ್ಲಿ ಧರ್ಮರಾಜ ಚಡಚಣ ಹತನಾಗಿ, ಪಿ.ಎಸ್.ಐ. ಗೋಪಾಲ ಹಳ್ಳೂರ ಎಡಗೈಗೆ ಒಂದು ಗುಂಡು ತಾಕಿತ್ತು. ಇದೇ ತರಹ ಪೊಲೀಸ್ ಡೈರಿಯಲ್ಲೂ ಷರಾ ಒತ್ತಲಾಗಿತ್ತು. ಆಗ ಪೊಲೀಸರ ಈ ಶೌರ್ಯಕ್ಕೆ ರಾಜ್ಯಾಧ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
ಪೊಲೀಸ್ ಎನಕೌಂಟರ್‍ನಲ್ಲಿ ಹತನಾದ ಧರ್ಮರಾಜ ಚಡಚಣನ ಸಹೋದರ ಗಂಗಾಧರ ಚಡಚಣ ಕೂಡ ಅಂದಿನಿಂದಲೇ ನಾಪತ್ತೆಯಾಗಿದ್ದ. ಈ ಇಬ್ಬರು ಸಹೋದರರ ತಾಯಿ ವಿಮಲಾಬಾಯಿ ನಾಪತ್ತೆಯಾಗಿದ್ದ ತನ್ನ ಮಗನನ್ನು ಹುಡುಕಿಕೊಡುವಂತೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಪರಿಣಾಮ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ದಕ್ಷ ಐ.ಪಿ.ಎಸ್. ಅಧಿಕಾರಿ ಅಲೊಕ ಕುಮಾರ ಪ್ರಕರಣವನ್ನು ಕೈಗೆತ್ತಿಗೊಂಡು ಎಳೆಎಳೆಯಾಗಿ ಬಿಡಿಸುತ್ತಾ ಹೋದಂತೆ ಅದು ತಮ್ಮ ಇಲಾಖೆಯ ಬುಡಕ್ಕೆ ಬಂದು ನಿಂತದ್ದನ್ನು ಕಂಡು ಬೆಚ್ಚಿ ಬಿದ್ದರು ! ದಶಕಗಳಿಂದ ಎರಡು ಕುಟುಂಬಗಳಾದ ಚಡಚಣ ಮತ್ತು ಭೈರಗೊಂಡ ದ್ವೇಷ, ಸೇಡು ಮತ್ತು ಬಡಿದಾಟ ಪೊಲೀಸರ ಸಹಕಾರದೊಂದಿಗೆ ಕೊನೆಯಾಗಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಯಿತು.
ಆ ಭಾಗದ ಮರಳು ಮಾಫಿಯಾದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಮಹದೇವ ಭೈರಗೊಂಡ ಮತ್ತು ಚಡಚಣ ಸಹೋದರರಲ್ಲಿ ಆಳವಾದ ವೈರತ್ವವಿತ್ತು. ಹೇಗಾದರೂ ಮಾಡಿ ಚಡಚಣ ಸಹೋದರರನ್ನು ಮುಗಿಸಬೇಕೆಂದು ಮಹದೇವ ಪೊಲೀಸರನ್ನೇ ಈ ಕಾರ್ಯಕ್ಕೆ ಬಳಸಿಕೊಂಡ ಧರ್ಮರಾಜನನ್ನು ಪೊಲೀಸರು ನಕಲಿ ಎನಕೌಂಟರನಲ್ಲಿ ಕೊಂದರೆ, ಆತನ ಸಹೋದರ ಗಂಗಾಧರನನ್ನು ವಿರೋಧಿಗಳು ಅಸಹ್ಯವಾಗಿ ಕೊಲೆಗೈದು ಆತನ ದೇಹವನ್ನು ಭೀಮಾ ನದಿಯಲ್ಲಿ ಬೀಸಾಕಿದರು. ಪಾತಕಿಗಳ ಈ ಕೃತ್ಯಕ್ಕೆ ಪೊಲೀಸರೇ ಸಹಕರಿಸಿದ್ದು. ಜನರ ವಿಶ್ವಾಸವನ್ನೇ ಹಾಳುಗೆಡವಿದಂತಾಗಿದೆ.
ಹಾಗಂತ ಪೊಲೀಸರನ್ನು ಸಂಶಯ ದೃಷ್ಟಿಯಿಂದ ನೋಡುವುದು ಸಹ ತಪ್ಪಾಗಿ ಬಿಡುತ್ತೆ. ಮಹಾರಾಷ್ಟ್ರದ ದಾಬೊಲ್ಕರ ಮತ್ತು ಪನ್ಸಾರೆ ಎಂಬ ವಿಚಾರವಾದಿಗಳ ಹತ್ಯೆಯನ್ನು ಸಿ.ಬಿ.ಐ. ಕೂಡ ಬೇದಿಸಲಿಕ್ಕೆ ಆಗಲಿಲ್ಲ. ಆದರೆ ನಮ್ಮ ರಾಜ್ಯದ ಪೊಲೀಸರು ಗೌರಿ ಲಂಕೇಶ ಮತ್ತು ಎಂ.ಎಂ. ಕಲ್ಬುರ್ಗಿ ಅವರ ಹತ್ಯೆ ಭೀಮಾ ತೀರದ ನಂಟು ಇದೆ ಅಂತಾ ಸಾಬೀತುಪಡಿಸಿದರು.
ಈ ಪ್ರಕರಣವನ್ನು ಸಂಪೂರ್ಣ ವಾಗಿ ಬೇದಿಸಿದ್ದು ದೇಶಾಧ್ಯಂತ ಶ್ಲಾಘನೆ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲೂ ದಕ್ಷ ಮತ್ತು ಭ್ರಷ್ಟ ಅಧಿಕಾರಿಗಳು ಇರುವುದು ಇಂತಹ ಪ್ರಕರಣಗಳಿಂದ ಕಂಡು ಬರುತ್ತದೆ. ಒಟ್ಟಿನಲ್ಲಿ ಯಾವುದು ನ್ಯಾಯವೋ…. ಯಾವುದು ಅನ್ಯಾಯವೋ….. ಎನ್ನುವುದು ನಾಗರಿಕ ಸಮಾಜಕ್ಕೆ ಬಿಟ್ಟಿದ್ದು.