ಗೋಂಧಳಿ ಸಮಾಜ ಸಂಘ

0
1618

ಶತಶತಮಾನಗಳಿಂದ ಅತ್ಯಂತ ಹಿಂದುಳಿದ ‘ಗೋಂಧಳಿ’ ಸಮಾಜ‘ ಈಗಲೂ ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಿಲ್ಲಾ! ಸ್ವತಂತ್ರ ಭಾರತದ 70 ವರ್ಷಗಳು ಕಳೆದರೂ ಗೋಂಧಳಿ ಸಮಾಜದಿಂದ ರಾಜಕೀಯವಾಗಿ ಒಬ್ಬ ಜನಪ್ರತಿನಿಧಿ ವಿಧಾನಸಭೆ, ವಿಧಾನಪರಿಷತ್ ಅಥವಾ ಲೋಕಸಭೆ ಪ್ರವೇಶಿಸಿಲ್ಲಾ. ಇನ್ನೂ ಶೈಕ್ಷಣಿಕವಾಗಿ ಹೇಳುವುದಾದರೆ ಭಾರತದ ಅತ್ಯುನ್ನತ ಸರ್ಕಾರಿ ಹುದ್ದೆಯಂದೇ ಪರಿಗಣಿಸುವ ಐ.ಎ.ಎಸ್. ಅಧಿಕಾರಿಯಾಗಿ ಒಬ್ಬರು ಆಯ್ಕೆಯಾಗಿಲ್ಲ. ಕೇವಲ ಬೆರಳಣಿಕೆಯಷ್ಟು ಜನ ಕೆಳಸ್ತರದ ಸರಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಆರ್ಥಿಕವಾಗಿ ಗೋಂಧಳಿ ಜನರು ತೀರಾ ಬಡವರು, ಸಮಾಜದ ಕುಲಕಸಬುಗಳಾದ ಪಾತ್ರೆ ವ್ಯಾಪಾರ, ಕೌದಿ ಹೊಲೆಯುವದು, ಜ್ಯೋತಿಷ್ಯ ವೃತ್ತಿ ಮತ್ತು ಗೋಂಧಳ ಹಾಕುವ ವೃತ್ತಿಯನ್ನು ಮಾಡುತ್ತಾ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಸಮಾಜದ ಬಹುಸಂಖ್ಯಾತ ಜನರು ಊರಿಂದ ಊರಿಗೆ ಅಲೆಯುತ್ತಾ ತಮ್ಮ ಜೀವನ ನಡೆಸುತ್ತಿರುವುದು ಗಮನಿಸಿದರೆ ಗೋಂಧಳಿ ಸಮಾಜ ಈಗಲೂ ಅಲೆಮಾರಿ ಜನಾಂಗವಾಗಿಯೇ ಉಳಿದಿದೆ. ಹೀಗೆ ಗೋಂಧಳಿ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ ಎನ್ನಲು ಇದು ಜೀವಂತ ನಿದರ್ಶನ. ಭಾರತದ ಸಂವಿಧಾನದಲ್ಲಿ ನಮ್ಮ ಗೋಂಧಳಿ, ಜೋಶಿ, ಬುಡಬುಡುಕಿ ಮತ್ತು ವಾಸುದೇವ ಸಮಾಜಗಳನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಿದ್ದಾರೆ. ಕರ್ನಾಟಕದಲ್ಲಿ ನಮ್ಮ ಸಮಾಜವನ್ನು ಹಿಂದುಳಿದ ವರ್ಗಗಳಲ್ಲಿಯೇ ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಯಂದು ವಿಂಗಡಿಸಿ ಪ್ರವರ್ಗ -1ರ ಮೀಸಲಾತಿ ಕಲ್ಪಿಸಿದ್ದಾರೆ. ಪ್ರವರ್ಗ -1ರ ಮೀಸಲಾತಿ ಇದ್ದರೂ ಕೂಡ ನಮ್ಮ ಸಮಾಜ ಅಭಿವೃದ್ದಿ ಹೊಂದದೆ ಇರುವುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿಯೇ ಒಂದು ಮೂಲ ಕಾರಣ ಗೋಂಧಳಿ ಸಮಾಜಕ್ಕೆ ಸರಕಾರದಿಂದ ಕಲ್ಪಿಸುವ ಪ್ರವರ್ಗ -1ರ ಮೀಸಲಾತಿಯ ಭಾಗ್ಯ ಅರ್ಹರಿಗೆ ತಲುಪುತ್ತಿಲ್ಲಾ. ಏಕೆಂದರೆ ಪ್ರವರ್ಗ -1ರ ಮೀಸಲಾತಿಯು ಕೇವಲ ಶೇ.4 ರಷ್ಟು ಇದೆ. ಮತ್ತು ಪ್ರವರ್ಗ -1ರಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಬಲಾಢ್ಯ ಜಾತಿಗಳು ಈ ಮೀಸಲಾತಿಯ ಸಿಂಹಪಾಲನ್ನು ದಶಕಗಳಿಂದ ಅನುಭವಿಸುತ್ತಿವೆ. ಹಾಗಾಗಿ ಈ ಗೋಂಧಳಿ ಮತ್ತು ಅದರ ಪರ್ಯಾಯ ಪದಗಳಾದ ಜೋಷಿ, ಬುಡಬುಡುಕಿ, ವಾಸುದೇವ ಸಮಾಜಗಳಿಗೆ ಪರಿಶಿಷ್ಠ ಪಂಗಡದ ಮೀಸಲಾತಿಯನ್ನು ನೀಡಿದರೆ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ.

ನಮ್ಮ ಈ ಗೋಂಧಳಿ ಸಮಾಜವನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸರಕಾರ ಸೇರಿಸಬೇಕಾದರೆ ಸಮಾಜದ ನಾಲ್ಕು ಸ್ತಂಭಗಳು ಗಟ್ಟಿಯಾಗಬೇಕು. ಆ ನಾಲ್ಕು ಸ್ತಂಭಗಳು ಯಾವವು ಎಂದರೆ 1. ಗುರುಪೀಠ ಸ್ಥಾಪನೆ, 2. ಗುಣಮಟ್ಟದ ಶಿಕ್ಷಣ, 3. ಸಂಘಟನೆ, 4. ಹೋರಾಟ ಈ ನಾಲ್ಕು ಸ್ತಂಭಗಳು ಗಟ್ಟಿಯಾದಾಗ ಮಾತ್ರ ನಮ್ಮ ಸಮಾಜದ ಕುಂದು ಕೊರತೆಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಬಹುದು. (ಇಲ್ಲಿ ಕಾಣಿಸಿದ ಪ್ರತಿ ಸ್ತಂಭದ ಕಾರ್ಯಚಟುವಟಿಕೆಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು)
ಈ ಮೇಲೆ ಕಾಣಿಸಿದ ನಾಲ್ಕು ಸ್ತಂಭಗಳಲ್ಲಿ ಒಂದು ಪ್ರಮುಖವಾದ ಸ್ತಂಭವೇ ‘ಸಂಘಟನೆ’ ಯಾವುದೇ ಸಮಾಜ, ಪಕ್ಷ, ರಾಜ್ಯ ಅಥವಾ ದೇಶ ಬಲಿಷ್ಠ ಎನಿಸಿಕೊಳ್ಳಲು ಸಂಘಟನೆ ಅತೀ ಮುಖ್ಯವಾದದ್ದು. ಒಂದು ಸಂಘಟನೆಯಲ್ಲಿ ಒಂದಕ್ಕಿಂತ ಹೆಚ್ಚು ಸಮಾನ ಮನಸ್ಕರರು ಸೇರಿ ಒಂದು ನಿರ್ದಿಷ್ಟ ಗುರಿ ತಲುಪಲು ಯೋಜನೆ ನಿರ್ಮಿಸಿರುತ್ತಾರೆ. ಒಂದು ಸಂಘಟನೆಯಲ್ಲಿ ನಾಯಕನ ಪಾತ್ರ ತುಂಬಾ ಮಹತ್ವವಾದದ್ದು. ಒಬ್ಬ ಸಮರ್ಥ ನಾಯಕನ ನೇತೃತ್ವದಲ್ಲಿ ಸಂಘಟನೆ ಯಾವುದೇ ಕಾರ್ಯವನ್ನು ಯಶಸ್ವಿಗೊಳಿಸುತ್ತದೆ.
ಸಂಘಟನೆಯಲ್ಲಿ ನಾಯಕನಾದವನು ಎಲ್ಲವನ್ನು ನಿಯಂತ್ರಿಸುವ ಅರ್ಹತೆವುಳ್ಳವನಾಗಿರಬೇಕು. ಅದೇ ತರಹ ನಾಯಕನು ಎಲ್ಲರನ್ನು ಒಗ್ಗೂಡಿಸಿ, ಸದಸ್ಯರಲ್ಲಿ ಆತ್ಮವಿಶ್ವಾಸ ತುಂಬಿ ತನ್ನ ಹಾದಿಯಲ್ಲೆ ಎಲ್ಲರನ್ನು ಕರೆದುಕೊಂಡು ಹೋಗುವ ಮನೋಭಾವ ಇರುವವನಿದ್ದರೇ ಆ ಸಂಘಟನೆ ತಾನು ಅಂದುಕೊಂಡಿದ್ದ ಗುರಿ ಸಾಧಿಸಿಯೇ ತೀರುತ್ತದೆ. ಸಮರ್ಥ ಸಂಘಟನೆ ಮತ್ತು ನಾಯಕನ ಕೊರತೆ ನಮ್ಮ ಸಮಾಜದಲ್ಲಿ ದಶಕಗಳಿಂದ ಇರುವುದರಿಂದಲೇ ಗೋಂಧಳಿಗರು ಇನ್ನೂ ಅಲೆಮಾರಿಗಳಾಗಿಯೇ ಉಳಿದಿದ್ದಾರೆ. ಭಾರತದಲ್ಲಿ ಒಂದು ಸಂಘಟನೆಯನ್ನು ಮಾಡಬೇಕಾದರೆ ಅದನ್ನು ಸಂವಿಧಾನದ ಚೌಕಟ್ಟಿನಲ್ಲಿ ಸ್ಥಾಪಿಸಬೇಕು. ಒಂದು ಸಂಘಟನೆ ಸ್ಥಾಪಿಸಲು ಮುಖ್ಯವಾಗಿ ಅದಕ್ಕೆ ತನ್ನದೇ ಆದ ಸಿಧ್ದಾಂತ, ಧ್ಯೇಯ, ಉದ್ದೇಶ ಮತ್ತು ಗುರಿ ಇರಬೇಕು. ಸಂಘಟನೆಯಲ್ಲಿರುವ ಸದಸ್ಯರ ಅರ್ಹತೆ ಮೇರೆU ಪದಾಧಿಕಾರಿಗಳಾಗುತ್ತಾರೆ. ನಂತರ ಆ ಸಂಘಟನೆಯು ಸಂವಿಧಾನದ ಆಧಾರದ ಮೇಲೆ ‘ಸಂಘ’ ಎಂದು ನೊಂದಣಿಯಾಗಬೇಕು.
ಗೋಂಧಳಿ ಸಮಾಜಕ್ಕೆ ಸಂಬಂಧಿಸಿದಂತೆ ಕಳೆದ 60 ವರ್ಷಗಳಲ್ಲಿ ಅನೇಕ ಸಂಘಗಳು ಹುಟ್ಟಿಕೊಂಡಿವೆ. ಅದರಲ್ಲಿ ಕೆಲವು ಕಾರ್ಯ ಸ್ಥಗೀತವಾದರೆ ಇನ್ನೂ ಕೆಲವು ಬೇರೆ ಸಂಘಗಳೊಂದಿಗೆ ಕೈ ಜೋಡಿಸಿವೆ. ಅದರಲ್ಲಿಯೇ ಕೆಲ ಪ್ರಮುಖ ಸಂಘಗಳ ಹೆಸರು ಈ ಕೆಳಗಿನಂತಿವೆ.
ಗೋಂಧಳಿ ಸಮಾಜ ಸಂಘ, ಕರ್ನಾಟಕ ರಾಜ್ಯ ಗೋಂಧಳಿ ಸಮಾಜ ಸಂಘ, ಜೋಷಿ, ಬುಡಬುಡಕಿ ಮತ್ತು ವಾಸುದೇವ ಸಮಾಜಗಳ ಒಕ್ಕೂಟ, ಅಲೆಮಾರಿ ಸಮಾಜಗಳ ಒಕ್ಕೂಟ ಹೀಗೆ ಅನೇಕ ಸಂಘಗಳು ಬೇರೆ-ಬೇರೆ ಅಧ್ಯಕ್ಷರ ನೇತೃತ್ವದಲ್ಲಿ ಸಮಾಜಕ್ಕಾಗಿ ಕಾರ್ಯನಿರ್ವಹಿಸಿವೆ.
ಕರ್ನಾಟಕದಲ್ಲಿ ಗೋಂಧಳಿ ಸಮಾಜದ ಜನಸಂಖ್ಯೆ ಕಡಿಮೆ ಇದ್ದು ಸಮಾಜದಲ್ಲಿ 3-4 ಸಂಘಗಳಿದ್ದರೆ ಹೋರಾಟದ ಹಾದಿ ತಪ್ಪಬಹುದು ಎಂಬ ಅನಿಸಿಕೆ ಸಮಾಜದ ಬಂಧುಗಳಲ್ಲಿ ಈ ಐದು ವರ್ಷಗಳ ಹಿಂದೆಯೇ ಮೂಡಿತ್ತು. ಹಾಗಾಗಿ ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘ ಎನ್ನುವ ಒಂದೇ ಸಂಘಟನೆ ಅಡಿಯಲ್ಲಿ ಮತ್ತು ಶ್ರೀ ಬಿ.ವಿ. ಭೋಸಲೆ ಅವರ ಅಧ್ಯಕ್ಷತೆ ಹಾಗೂ ಇದೇ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಜಯರಾಮಯ್ಯ ಅವರು ನೇತೃತ್ವದಲ್ಲಿ ಸಂಘವನ್ನು ಮುನ್ನಡೆಸಲು ತಿರ್ಮಾನಿಸಲಾಯಿತು.
ಸಮಾಜಕ್ಕೆ ಒಂದೇ ಸಂಘ ಎನ್ನುವ ಸಿದ್ದಾಂತದೊಂದಿಗೆ ‘ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘ’ ಕ್ಕೆ ಸಮಾಜದ ಇತರೆ ಸಂಘಗಳು ಪರೋಕ್ಷವಾಗಿ ಬೆಂಬಲಿಸಿದರು. ಇದರ ಪರಿಣಾಮ 12 ನವೆಂಬರ್ 2017 ರಂದು ಕೂಡಲ ಸಂಗಮದಲ್ಲಿ ಗೋಂಧಳಿ ಸಮಾಜದ ಬೃಹತ್ ಸಮಾವೇಶ ಯಶಸ್ವಿಯಾಗಿ ಜರುಗಿತು. ಸಪ್ಟೆಂಬರ್ 2018ಕ್ಕೆ ಅ.ಕ.ಗೋ.ಸ.ಸಂಘದ ಅಧ್ಯಕ್ಷರಾದ ಬಿ.ಬಿ.ಭೋಸಲೆ ಅವರು ತಮ್ಮ ಸೇವಾ ಅವಧಿ ಮುಕ್ತಾಯವಾದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಧ್ಯಕ್ಷರು ರಾಜೀನಾಮೆ ಕೊಟ್ಟ ದಿನದಿಂದಲೇ ಹೊಸ ಅಧ್ಯಕ್ಷರ ಗಾದಿಗಾಗಿ ಕಚ್ಚಾಟ ಪ್ರಾರಂಭವಾಯಿತು. ಅ.ಕ.ಗೋ.ಸ.ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಮೈಸೂರಿನ ಕೆ.ಎಂ. ಜಯರಾಮಯ್ಯನವರು ಅ.ಕ.ಗೋ.ಸ.ಸಂಘದ ಅಧ್ಯಕ್ಷರಾಗಬೇಕು ಎನ್ನುವ ಬಯಕೆ ವ್ಯಕ್ತಪಡಿಸಿ, ತರಾತುರಿಯಲ್ಲಿ ತಾವೇ ಇನ್ನು ಮುಂದೆ ಈ ಸಂಘಕ್ಕೆ ಅಧ್ಯಕ್ಷರೆಂದು ಘೋಷಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪಿ.ಡಿ.ಎಫ್. ದಾಖಲೆಗಳನ್ನು ಬಿಡಲಾರಂಭಿಸಿದರು. ಬಿ.ವಿ. ಭೋಸಲೆ ಅವರ ನಂತರ ಸಂಘಕ್ಕೆ ಅರ್ಹ ನಾಯಕರೆಂದು ಕೆ.ಎಂ.ಜಯರಾಮಯ್ಯ ಅವರನ್ನು ಬೆಂಬಲಿಸಬೇಕೆಂದು ಬಹುಸಂಖ್ಯಾತ ಗೋಂಧಳಿಗರ ಮನಸ್ಸಿನಲ್ಲಿತ್ತು. ಆದರೆ ಯಾರೊಬ್ಬರ ಗಮನಕ್ಕೂ ತರದೇ ದಕ್ಷಿಣ ಕರ್ನಾಟಕದ ಕೆಲ ಮುಖಂಡರೊಂದಿಗೆ ಮಾತ್ರ ಚರ್ಚಿಸಿ ತಾವೇ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಯಿತು. ಇದರ ಮಧ್ಯೆ ಬಿ.ವಿ.ಭೋಸಲೆ ಮತ್ತು ಕೆ.ಎಂ. ಜಯರಾಮಯ್ಯನವರು ಅಧ್ಯಕ್ಷರ ಆಯ್ಕೆ ಪ್ರಕ್ರೀಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿಯೇ ಆರೋಪ ಪ್ರತ್ಯಾರೋಪ ಮಾಡಲಾರಂಭಿಸಿದರು. ಸಮಾಜದ ಇಬ್ಬರು ನಾಯಕರ ನೇರ ನೇರ ಕಚ್ಚಾಟ ಗಮನಿಸಿದ ಹಿರಿಯರು ತುಮಕೂರಿನಲ್ಲಿ ದಿನಾಂಕ : 21-10-2018ರಂದು ಒಂದು ಸಭೆ ಮಾಡಿದರು. ಅಲ್ಲಿ ಇಬ್ಬರು ನಾಯಕರನ್ನು ಒಂದುಗೂಡಿಸುವ ಪ್ರಯತ್ನ ವಿಫಲವಾಯಿತು.
ತುಮಕೂರಿನ ಸಭೆಯ ನಂತರದ 20 ದಿನಗಳ ಅಂತರದಲ್ಲಿ ಗೋಂಧಳಿಗರ ಮೂರು ರಾಜ್ಯಮಟ್ಟದ ಸಂಘಗಳು ಹುಟ್ಟಿಕೊಂಡವು!!! ದಿನಾಂಕ : 04-11-2018ರಂದು ಗದಗನಲ್ಲಿ ಬಿ.ವಿ. ಭೋಸಲೆ ಅವರ ನೇತೃತ್ವದಲ್ಲಿ ‘ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘ’ಕ್ಕೆ ವಿಜಯಪುರದ ಮೋಹನ ಭೀಸೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಂತರ ದಿನಾಂಕ : 10-11-2018ರಂದು ಹುಬ್ಬಳ್ಳಿಯಲ್ಲಿ ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದೇ ಉಳಿದಿದ್ದ ಸಮಾನ ಮನಸ್ಕರರು ಸೇರಿ ‘ಕರ್ನಾಟಕ ರಾಜ್ಯ ಗೋಂಧಳಿ ಸೇವಾ ಸಂಘ’ ಕ್ಕೆ ಮುನವಳ್ಳಿಯ ಶಿವಾನಂದ ಜೋಷಿ (ಪಾಚಂಗೆ) ಇವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಇದಾದ ಮರುದಿನವೇ ಅಂದರೆ ದಿನಾಂಕ : 11-11-2018ರಂದು ಬೆಂಗಳೂರಿನಲ್ಲಿ ಕೆ.ಎಂ. ಜಯರಾಮಯ್ಯನವರು ‘ಅಖಂಡ ಕರ್ನಾಟಕ’ವೊಂದನ್ನು ಹುಟ್ಟು ಹಾಕಿ ಅದಕ್ಕೆ ತಾವೇ ಅಧ್ಯಕ್ಷರಾದರು. ಹೀಗೆ ತಮ್ಮ ಪ್ರತಿಷ್ಠೆ ಮತ್ತು ಅಧ್ಯಕ್ಷಗಿರಿಯ ಗಾದಿಗಾಗಿ ಒಂದೇ ಸಮಾಜಕ್ಕೆ ಮೂರು ಸಂಘಗಳನ್ನು ಮಾಡಿ ‘ಮನೆ ಒಂದು ಮೂರು ಬಾಗಿಲು’ ಪರಿಸ್ಥಿತಿ ಮಾಡಿಟ್ಟಿದ್ದಾರೆ.
ಮುಂದಿನ ದಿನಮಾನಗಳಲ್ಲಿ ಈ ನಾಯಕರು ಒಟ್ಟುಗೂಡಿ ಒಂದೇ ಸಂಘಟನೆ ಅಡಿಯಲ್ಲಿ ಹೋಗುತ್ತಾರೊ…. ಅಥವಾ ತಾವೇ ಸ್ಥಾಪಿಸಿದ ಸಂಘಗಳಲ್ಲಿಯೇ ಗುರುತಿಸಿಕೊಂಡು ಮುನ್ನಡೆಯುತ್ತಾರೊ… ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಅನೇಕ ನಿಸ್ವಾರ್ಥಿ ಗೋಂಧಳಿಗರು ಯಾವುದೇ ಸಂಘದೊಂದಿಗೆ ಗುರುತಿಸಿಕೊಳ್ಳದೇ ತಟಸ್ಥರಾಗಿರುತ್ತೇವೆಂದು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here