- ಅಲೆಮಾರಿಗಳ ಜೀವನ ಮತ್ತು ಡಿಜಿಟಲ್ ಯುಗ
ಸ್ವತಂತ್ರ ಭಾರತದ 76 ವರ್ಷಗಳು ಕಳೆದರೂ, ದೇಶದಲ್ಲಿ ಇನ್ನೂವರೆಗೂ ಹಲವಾರು ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶ್ಯೆಕ್ಷಣಿಕವಾಗಿ ತೀರಾ ಹಿಂದುಳಿದಿವೆ! ಅಭಿವೃದ್ಧಿ ವಂಚಿತ ಸಮಾಜದವರಿಗೆ ಮೀಸಲಾತಿ ಏನ್ನುವುದು ಕೇವಲ ಮುಗಿನಮೇಲೆ ತುಪ್ಪ ಸವರಿದಂತಾಗಿದೆ. ಈ ಕಾಲಘಟ್ಟದಲ್ಲಿ ವಂಚಿತ ಸಮಾಜದ ಪರ ದ್ವನಿ ಎತ್ತುವವರನ್ನು ಗೇಲಿಮಾಡುವ ಜನರೇ ಹೆಚ್ಚು! ವಾಸ್ತವಂಶವೆಂದರೆ ನಮ್ಮ ದೇಶದಲ್ಲಿ ಇಂದಿಗೂ ಯಾರ ಲೆಕ್ಕಕ್ಕೂ ಸಿಗದ ನೂರಾರು ಅಲೆಮಾರಿ, ಬುಡಕಟ್ಟು, ಪಶುಪಾಲಕ ಸಮುದಾಯಗಳಿವೆ. ಅವರ ಪಾಲಿಗೆ ನ್ಯಾಯ, ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ.
ಜಗತ್ತಿನಾದ್ಯಂತ 90 ದೇಶಗಳಲ್ಲಿ 37 ಕೋಟಿ ಮೂಲನಿವಾಸಿ– ಅಲೆಮಾರಿಗಳು ವಾಸಿಸುತ್ತಿದ್ದಾರೆ. ಸುಮಾರು 7,000 ಭಾಷೆಗಳಲ್ಲಿ ಮಾತನಾಡುವ ಇವರು, 5,000 ವಿಭಿನ್ನ, ಅನನ್ಯ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ನಮ್ಮರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51, ಪರಿಶಿಷ್ಟ ಪಂಗಡದಲ್ಲಿ 23, ಒಬಿಸಿ ಪಟ್ಟಿಯಲ್ಲಿ 46 ಅಲೆಮಾರಿ ಸಮುದಾಯಗಳಿವೆ. ಇದರಲ್ಲಿ ಸೂಕ್ಷ್ಮ ಜಾತಿಗಳು, ಅತಿಸೂಕ್ಷ್ಮ ಮೂಲನಿವಾಸಿಗಳು ಹಾಗೂ ಅಸ್ಮಿತೆಯೇ ಇಲ್ಲದ ಸಮುದಾಯಗಳು ಸಹ ಸೇರಿವೆ.
ಅಲೆಮಾರಿಗಳ ಶೋಚನಿಯ ಸ್ಥಿತಿ ನೋಡಿದಾಗ ವೈವಿಧ್ಯಮಯ ಭಾರತದ ಶ್ರೀಮಂತ ಸಂಸ್ಕೃತಿಯ ಬೇರುಗಳು ಬುಡಸಮೇತ ಕಳಚಿ ಹೋಗುತ್ತಿವೆಯೇ ಎನಿಸುತ್ತದೆ. ಗೋಂಧಳಿ, ಬುಡಬುಡಕಿ, ಗೌಳಿ, ಕಾಡುಗೊಲ್ಲ, ಶಿಕ್ಕಲಿಗಾರನಂತಹ ಅಲೆಮಾರಿಗಳು, ಕೊರಗ, ಜೇನುಕುರುಬ, ಆದಿಮ ಬುಡಕಟ್ಟುಗಳ ದುಸ್ತರ ಬದುಕೇ ಇದಕ್ಕೆ ಸಾಕ್ಷಿ.
ಮಾಂಗ್ ಗಾರುಡಿ, ಫಾರ್ದಿ, ಚಪ್ಪರ್‌ಬಂದ್, ಗಂಟಿಚೋರ್, ಡುಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ ಮುಂತಾದ ಬುಡಕಟ್ಟುಗಳು ಚಿಂತಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ಅಲೆಮಾರಿಗಳ ಜಗತ್ತಿನ ಒಳಹೊಕ್ಕು ನೋಡದ ಹೊರತು ಈ ಸಮುದಾಯದವರ ಬವಣೆ ಅರ್ಥವಾಗದು.
ಪ್ರಾದೇಶಿಕ ಮಿತಿ ಹೊಂದಿರುವ ಕಮ್ಮಾರ, ಕಣಿಯನ್, ಸಿದ್ಧಿಯಂಥ ಪರಿಶಿಷ್ಟ ಪಂಗಡಗಳು ಅಭದ್ರತೆಯ ಬದುಕು ಸವೆಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸವಿರುವ ಸಿದ್ಧಿಗಳು ಎಸ್‍ಟಿ ಪಟ್ಟಿಯಲ್ಲಿದ್ದಾರೆ. ಪಕ್ಕದ ಧಾರವಾಡ, ಬೆಳಗಾವಿಯಲ್ಲಿನ ಸಿದ್ಧಿ ಕುಟುಂಬಗಳಿಗೆ ಎಸ್‍ಟಿ ಸೌಲಭ್ಯ ಸಿಗುವುದಿಲ್ಲ. ಪ್ರತ್ಯೇಕ ಜಾತಿ ಅಸ್ಮಿತೆ ಹಾಗೂ ಸಂವಿಧಾನಬದ್ಧವಾದ ವರ್ಗೀಕೃತ ಸ್ಥಾನಮಾನ ಪಡೆಯಲಾಗದ ಧನಗರ ಗೌಳಿ, ಶಿಕ್ಕಲಿಗಾರ, ಕಾಡುಗೊಲ್ಲದಂತಹ ಅತಂತ್ರ ಸಮುದಾಯಗಳೂ ಇವೆ.
ಇನ್ನೂ ಗೋಂಧಳಿ, ಜೋಷಿ, ಬುಡಬುಡಕಿ ಮತ್ತು ವಾಸುದೇವ ಜಾತಿಗಳ ಜನರ ಸಮಸ್ಯೆ ಕೇಳತೀರದು! ಮೂಲತಃ ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಗುಪ್ತಚರರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಈ ಸಮಾಜ, ವ್ಯೆರಿ ರಾಜರೂಗಳ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ ನೇರವಾಗಿ ಶಿವಾಜಿ ಮಹಾರಾಜರಿಗೆ ಹೇಳುತ್ತಿದ್ದರು. ವ್ಯೆರಿ ರಾಜ್ಯದ ಸ್ಯೆನಿಕರಿಗೆ ಸಂಶಯ ಬರಬಾರದು ಎನ್ನುವ ಅಲೋಚನೆಯಿಂದ ದೇವರ ಹಾಡುಗಳನ್ನು ಹಾಡುತ್ತ ಅಲೆಯುತ್ತಿದ್ದರು.
ಶಿವಾಜಿ ಮಹಾರಾಜರ ಸಂಸ್ಥಾನದ ಅವನತಿ ನಂತರ ಈ ಸಮಾಜದ ಜನರು ಅನಾಥರಾದರು. ಆಗಲೇ ತಮ್ಮ ಮೂಲ ಸ್ಥಾನ ಬಿಟ್ಟು ಬೇರೆ ಬೇರೆ ರಾಜ್ಯಗಳಲ್ಲಿ ಗುಡಚರ್ಯೆ ಮಾಡುತ್ತಿದ್ದವರು, ಮರಾಠಾ ಸಾಮ್ರಾಜ್ಯ ಅವನತಿ ನಂತರ ಅಲೆಮಾರಿಗಳಾಗಿ ತಮ್ಮ ಹೊಟ್ಟೆ ಪಾಡಿಗಾಗಿ ದೇವಿಯ ಆರಾಧನೆ ಮಾಡಿ ಗೋಂಧಳ ಹಾಕುವುದು, ಜ್ಯೋತಿಷ್ಯ ವೃತ್ತಿ, ಪಾತ್ರೆ ವ್ಯಾಪಾರ, ಮತ್ತು ಕೌದಿ ಹೋಲೇವುದನ್ನು ತಮ್ಮ ಕಾಯಕನ್ನಾ ಗಿಸಿದರು. ಮಹಾರಾಷ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಮುದಾಯಕ್ಕೆ ಕರ್ನಾಟಕದಲ್ಲಿ ಪ್ರವರ್ಗ -1 ರ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ನಿಜ ಅರ್ಥದಲ್ಲಿ ಅಲೆಮಾರಿಯಾದ ಈ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ಆಯೋಗಗಳು ಸರ್ಕಾರಕ್ಕೆ ತಮ್ಮ ವರದಿಗಳನ್ನು ಸಲ್ಲಿಸಿದ್ದಾರೆ.
ಪಶುಪಾಲನೆ ಕಸುಬಿನ ಧನಗರ ಗೌಳಿ ಸಮುದಾಯವು ರಾಜ್ಯದಲ್ಲಿ ಗೌಳಿ, ಹಿಂದೂ ಧನಗರ, ಧನಕರ ಗೌಳಿ, ಕಾಡು ಗೌಳಿ, ಧನಗರ ಮರಾಠಿ, ಕೃಷ್ಣ ಮರಾಠಿ, ಕಚ್ಚೆ ಗೌಳಿ… ಮುಂತಾದ ಹಲವು ಹೆಸರುಗಳಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದೆ. ಅಲ್ಲದೇ ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ಬಿ ಇತ್ಯಾದಿ ಕೆಟಗರಿಗಳಲ್ಲಿ ಗುರುತಿಸಿಕೊಂಡಿದೆ. ಈ ವರ್ಗಕ್ಕೆ ಸಂವಿಧಾನಬದ್ಧವಾದ ವರ್ಗಿಕೃತ ಸ್ಥಾನಮಾನವೂ ಇಲ್ಲದಂತಾಗಿದೆ.
ಶಿಕ್ಕಲಿಗಾರ ಕೂಡ ಶಿಕ್ಕಲಿಗ, ಶಿಕ್ಲಿಗ, ಶಿಕ್ಕಲಿಗರ, ಚಿಕ್ಕಲಿಗೆರ್… ಹೆಸರುಗಳೊಂದಿಗೆ ಅಸ್ಮಿತೆಗಾಗಿ ತಡಕಾಡುತ್ತಿದೆ. ಹೀಗೆ ಹಲವಾರು ಅಲೆಮಾರಿಗಳನ್ನು ಹತ್ತಾರು ಹೆಸರುಗಳಲ್ಲಿ ಗುರುತಿಸುವುದರಿಂದ ಜಾತಿ ಪ್ರಮಾಣಪತ್ರ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದೇ ಸವಾಲಾಗಿದೆ. ಇಂಥ ಸಮುದಾಯಗಳಿಗೆ ಪ್ರಬಲ ಜಾತಿಯವರೊಂದಿಗೆ ಹೋರಾಡುವ ಶಕ್ತಿಯೂ ಇಲ್ಲ. ವೋಟ್ ಬ್ಯಾಂಕ್ ಲೆಕ್ಕಾಚಾರ ಮಾಡುವ ರಾಜಕಾರಣಿಗಳಿಗೆ ಇಂಥ ಸಣ್ಣಸಮುದಾಯಗಳು ಮುಖ್ಯ ಎನಿಸುವುದಿಲ್ಲ.
ಹೀಗಿರುವಾಗ ಈ ಡಿಜಿಟಲ್ ಕಾಲಘಟ್ಟದಲ್ಲಿ ಭಾರತವು ನಿಜವಾಗಿಯೂ ಪ್ರಗತಿ ಕಂಡಿದೆಯೇ ಎಂಬ ಪ್ರಶ್ನೆ ಕಾಡದಿರದು.
ಪ್ರಕೃತಿ ಸಹಜ ಜೀವನ ನಡೆಸುವ ಅಲೆಮಾರಿಗಳು ಮೂಲತಃ ಕಾಡಿನ ಮಕ್ಕಳು. ಆಧುನಿಕತೆಯ ಕೆನ್ನಾಲಗೆ, ಜಾಗತೀಕರಣದ ಹೊಟ್ಟೆಬಾಕತನದಲ್ಲೂ ದೇಶೀಯ ಗಟ್ಟಿತನ, ತಮ್ಮತನ ಸಾರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸ್ಮಿತೆಗೆಕೊಡಲಿ ಪೆಟ್ಟು ಬಿದ್ದರೆ ಅಲೆಮಾರಿಗಳಿಗೆ ಉಳಿಗಾಲವಿಲ್ಲ. ದೇಶದ ಉದ್ದಗಲಕ್ಕೂ ತಿರುಗಾಡಿ ಭಾರತದ ನಾಡಿಮಿಡಿತ ಅರಿತಿದ್ದ ಗಾಂಧೀಜಿ ಇವೆಲ್ಲವನ್ನೂ ಗಮನಿಸಿಯೇ ‘ಗ್ರಾಮ ಸ್ವರಾಜ್ಯ’ದ ಚಿಂತನೆ ಬಿತ್ತಿರಬಹುದು.
ಸೆಟ್ಲಮೆಂಟ್ (ವಸಾಹತು) ಕುರಿತು ಹೇಳದಿದ್ದರೆ ಕರ್ನಾಟಕದ ಅಲೆಮಾರಿಗಳ ಚರಿತ್ರೆ ಅಪೂರ್ಣ. ಇಲ್ಲಿ ಪ್ರತಿನಿತ್ಯ ಬದುಕಿ ಸಾಯುತ್ತಿರುವ ನೂರಾರು ಜೀವಗಳ ಬದುಕು- ಬವಣೆಗಳ ಬಂಧನವಿದೆ. ಸೆಟ್ಲಮೆಂಟ್ ಎಂಬುದು ಬ್ರಿಟಿಷರ ಒಡೆದು ಆಳುವ ನೀತಿ ಫಲ. ಈ ಸಮುದಾಯದವರನ್ನು ಸಮಾಜಘಾತುಕರು, ಕಳ್ಳರು, ಅಪರಾಧಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ತಂತಿಬೇಲಿಯೊಳಗೆ ಒಂದು ವ್ಯವಸ್ಥೆ ಸೃಷ್ಟಿಸಿ ಅದರೊಳಗೆ ಬ್ರಿಟಿಷರು ಬಂಧಿಸಿದರು. 1871ರಲ್ಲಿ ಹುಟ್ಟುಪಡೆದ ‘ಕ್ರಿಮಿನಲ್ ಟ್ರೈಬ್ಸ್’ ಚರಿತ್ರೆ, ಸ್ವತಂತ್ರ ಭಾರತದಲ್ಲಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ! ಬ್ರಿಟಿಷರು ಕೊಟ್ಟ ‘ಕ್ರಿಮಿನಲ್ಸ್’ ಎಂಬ ಲೇಬಲ್‍ನಿಂದಾಗಿ ಈ ಸಮುದಾಯದವರು ಇಂದಿಗೂ ನಮ್ಮ ನಡುವೆ ಕಳಂಕಿತರಾಗಿಯೇ ಬದುಕುತ್ತಿದ್ದಾರೆ.
ಕರ್ನಾಟಕದಲ್ಲಿರುವ ಸೆಟ್ಲಮೆಂಟ್‍ಗಳಲ್ಲಿ ಹುಬ್ಬಳ್ಳಿ ಸೆಟ್ಲಮೆಂಟ್ ದೊಡ್ಡದು. ಈ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಭೋವಿ, ಹರಣ್ ಪಾದ್ರಿ, ಕಂಜರಭಾಟ್, ಚಪ್ಪರಬಂದ್ ಸಮುದಾಯದವರು ನೆಲೆಸಿದ್ದಾರೆ.
ಗದಗ-ಬೆಟಗೇರಿಯ ಸೆಟ್ಲಮೆಂಟ್, ಈ ಸೆಟ್ಲಮೆಂಟ್‌ನಲ್ಲಿ ಕೊರಮ, ,ಚಪ್ಪರಬಂದ್, ಕಂಜರಭಾಟ್, ಪಾರ್ಧಿ ಸಮುದಾಯದವರು ಇದ್ದಾರೆ.
ವಿಜಯಪುರದ ಸೆಟ್ಲಮೆಂಟ್‌ನಲ್ಲಿ ಹರಣಶಿಕಾರಿ, ಗಂಟಿಚೋರ, ಚಪ್ಪರಬಂದ್ ಸಮುದಾಯಗಳು ಕಂಡುಬರುತ್ತವೆ. ಕಂಜರಭಾಟ್, ಕೊರಮ ಮತ್ತು ಮಾಂಗ್ಗಾರುಡಿಗಳು ಮೊದಲಿಗೆ ಇಲ್ಲಿದ್ದು, ತರುವಾಯ ಬೇರೆ ಕಡೆ ಹೋಗಿ ನೆಲೆಸಿರುವುದು ತಿಳಿದುಬರುತ್ತದೆ.
ಬಾಗಲಕೋಟೆಯ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಚಪ್ಪರಬಂದ್, ಪಾರ್ಧಿಗಳು ಕಂಡುಬರುತ್ತಾರೆ.
ಗೋಕಾಕ್ ಫಾಲ್ಸ್ ಸೆಟ್ಲಮೆಂಟ್‌ನಲ್ಲಿ ಕೊರಮ ಮತ್ತು ಗಂಟಿಚೋರ್ ಸಮುದಾಯಗಳಿವೆ.
ದಾಂಡೇಲಿಯಲ್ಲಿ ಗಂಟಿಚೋರ್ ಸಮುದಾಯವಿದೆ. ಹಿಂದೆ ಕಂಜರಭಾಟ್ ಇದ್ದಿತ್ತೆನ್ನಲಾದರೂ, ಅವರು ಇಂದು ಸೆಟ್ಲಮೆಂಟ್ ಹೊರಗೆ ಹಳೆ ದಾಂಡೇಲಿಯಲ್ಲಿ ಕಂಜರ್ ಭಾಟ್ ಕಾಲೊನಿಯಲ್ಲಿ ನೆಲೆ ನಿಂತಿದ್ದಾರೆ.
2021ರ ವೇಳೆಗೆ ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವುದು ಸರ್ಕಾರಗಳ ಗುರಿ. ಈ ಅಲೆಮಾರಿಗಳು ಸರ್ಕಾರದ ಲೆಕ್ಕದಲ್ಲಿದ್ದಾರೆಯೇ? ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ, ಸ್ವಂತ ನೆಲೆಯಿಲ್ಲ, ಅಧಿಕೃತ ಪಟ್ಟಿಯಲ್ಲಿ ಸ್ಥಾನವಿಲ್ಲ, ರಾಜ್ಯದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ‘ಇಲ್ಲ’ಗಳ ನಡುವೆಯೇ ಇವರ ಬಾಳು ಕರಗುತ್ತಿದೆ. ಹೀಗಿರುವಾಗ ಎಲ್ಲಿಯ ಮನೆ? ಎಲ್ಲಿಯ ಸೌಕರ್ಯ? ಎಲ್ಲಿದೆ ಆರೋಗ್ಯ ಸೌಲಭ್ಯ? ಎಲ್ಲಿದೆ ಶಿಕ್ಷಣ?
ಒಬ್ಬ ಅಲೆಮಾರಿ ಹಿರಿಯಜ್ಜ ತಮ್ಮ ಅನುಭವ ಹಂಚಿಕೊಂಡಂತೆ, ‘ಬಾಕಿ ಉಳಿದಿರುವುದೊಂದೇ, ಸ್ವಂತಂತ್ರ ಭಾರತದಲ್ಲಿ ಸ್ವತಂತ್ರ ಅಸ್ತಿತ್ವ ಸಿಗದೆ, ಕರೆಸಿಕೊಳ್ಳಲು ಹೆಸರಿಲ್ಲದೆ, ಉಳಿಯಲು ಸೂರಿಲ್ಲದೆ ಮಣ್ಣಾಗಿ ಹೋಗುವುದು’. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ನವ ಕರ್ನಾಟಕ ನಿರ್ಮಾಣ’ದ ಕನಸುಗಳಲ್ಲಿ ಅಲೆಮಾರಿಗಳು ಲೆಕ್ಕಕ್ಕೆ ಸಿಕ್ಕರೆ ಭಾರತ ಇನ್ನೂ ಉಜ್ವಲವಾಗಿ ಪ್ರಕಾಶಿಸುವುದಲ್ಲವೇ?
– ವಿಶಾಲ ಸುಗತೆ, ಉಪ-ಸಂಪಾದಕರು, ಗುಪ್ತಚಾರ ಕನ್ನಡ ವಾರ ಪತ್ರಿಕೆ.